Wednesday, June 30, 2010

ಮರಳ್ಗಳ್ಳರು

ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ....
ಕಲೀಲ ತಾನೇ ಗುಡ್ಡೆ ಹಾಕಿದ ಮರಳ ದಿಣ್ಣೆ ಮೇಲೆ ಬೀಡಿ ಎಳೀತಾ ಎಳೀತಾ, ರೌದ್ರವಾಗಿ ಬಂದು ಪ್ರಶಾಂತವಾಗಿ ತನ್ನೆದುರಿಗೆ ಬಂದು ನಿಂತ ಬೆಣ್ಣೆ ಹೊಳೆಯನ್ನು ನೋಡುತ್ತಾ .... ಪಟೇಲರು ಹೇಳಿದ ಹೊಸ ನೌಕರಿ ಬಗ್ಗೆ ಯೋಚನೆ ಮಾಡ್ತಾ ಇದ್ದ.

ಬೆಣ್ಣೆ ಹೊಳೆಗೆ ಹೆಸರು ಬಂದದ್ದೆ ಕಲೀಲನ ಜೀವನಾಡಿಯಾದ ಈ ಬೆಳ್ಳಗಿನ ಮರಳಿನಿಂದ. ಬೆಣ್ಣೆ ಹೊಳೆ ವಜ್ರಗಿರಿಯ ಒಡಲಾಳದಿಂದ ಹುಟ್ಟಿ ಶಿಖರದ ತುದಿಯಿಂದ ಹರಿದು ತನ್ನ ದಾರಿಯುದ್ದಕ್ಕೂ ಕಲ್ಲುಗಳ ಮೇಲೆ ಧುಮ್ಮಿಕ್ಕುತ್ತಾ ನೂರಾರು ಜಲಪಾತಗಳನ್ನು ನಿರ್ಮಿಸಿ ನಂತರ ವಿಶ್ರಾಂತಿಗೇನೋ ಎಂಬಂತೆ ನೆಲ್ಲೂರಿನ ಈ ಮಡುವಿನಲ್ಲಿ ದೊಡ್ಡ ಸರೋವರವನ್ನೇ ನಿರ್ಮಿಸಿತ್ತು. ತನ್ನ ದಾರಿಯಲ್ಲಿ ಸಿಕ್ಕ ಬೆನಚುಗಲ್ಲುಗಳನ್ನು ಈಗ್ಗೆ ಮಿಲಿಯಾಂತರ ವರ್ಷಗಳಿಂದ ಕೊರೆಯುತ್ತಾ, ತೀಡುತ್ತಾ ಉಂಟಾದ ಹೊಳೆಯುವ ಮರಳಿನ ಸಣ್ಣ ಸಣ್ಣ ಸ್ಫಟಿಕಗಳನ್ನು ವಿಶಾಲವಾಗಿ ಹರಡಿ ಈ ಮಡುವನ್ನು ಸಾಗರದ ತೀರದಂತೆ ಮಾಡಿತ್ತು. ಹೊಳೆಯುವ ಮರಳಿನ ಈ ಕೊಳವನ್ನು ಜನ ಬಿಳೀಮಡುವು ಎಂದೇ ಕರೆಯಿತ್ತಿದ್ದರು.

ಬಿಳೀ ಮಡುವಿನ ದಂಡೆಯ ಮೇಲೆ ನೇರಳೆ ಮರದ ಹಿಂದಿನ ದಾರಿಯೇ ಕಲೀಲನ ಮನೆಗೆ ಹೋಗುವ ದಾರಿ. ಸುಮಾರು ಒಂದು ಕೂಗಳತೆಯ ದಾರಿ. ಕಲೀಲ ತನಗೆ ಬುದ್ಧಿ ತಿಳಿದಾಗಿಂದಲೂ ಮರಳು ತೋಡುವುದನ್ನೇ ಕಸುಬು ಮಾಡಿಕೊಂಡಿದ್ದ. ಚಿಕ್ಕ ದೋಣಿಯನ್ನು ಉದ್ದ ಗೂಟದ ಸಹಾಯದಿಂದ ಮಡುವಿನ ಮಧ್ಯ ಕಟ್ಟುತ್ತಿದ್ದ. ನಂತರ ಬೆತ್ತದ ಬುಟ್ಟಿಯ ಜೊತೆ ಆಳಕ್ಕೆ ಧುಮುಕಿ, ಬುಟ್ಟಿ ತುಂಬಾ ಮರಳನ್ನು ಬಾಚಿ ಮೇಲಕ್ಕೆ ಈಜಿ ಬಂದು ದೋಣಿಯ ಒಳಗೆ ಸೇರಿಸುತ್ತಿದ್ದ. ಹೀಗೆ ಪ್ರತಿ ಸರಿಯೂ ನೀರೊಳಗೆ ಧುಮುಕಿ ಮರಳನ್ನು ತರುವುದು ಕಷ್ಟದ ಬದುಕಾಗಿತ್ತು. ಪ್ರತೀ ಸರಿಯೂ ೪-೫ ನಿಮಿಷ ನೀರೊಳಗೆ ಉಸಿರು ಬಿಗಿ ಹಿಡಿದು ಕೆಲಸ ಮಾಡಬೇಕಿತ್ತು. ನೀರು ಮಿಶ್ರಿತ ಮರಳು ತುಂಬಾ ಭಾರ, ಅದನ್ನು ಎತ್ತಿ ದೋಣಿಯೊಳಗೆ ಸೇರಿಸಿದುವುದೆಂದರೆ ಪಾಪ ಕಲೀಲನಿಗೆ ನೀರಿನ ಒಳಗೂ ಮೈ ಬೆವರುತ್ತಿತ್ತು. ಆದರೆ ಕಲೀಲ ಕೆಲಸಕ್ಕೆ ಹೆದರಿದವನಲ್ಲ, ಪ್ರತೀ ವರ್ಷದಂತೆ ಬುಟ್ಟಿ ತುಂಬಾ ಮರಳು ದೋಣಿ ಸೇರುತ್ತಿತ್ತು, ಮರಳು ತುಂಬಿದ ದೋಣಿಗಳು ದಂಡೆ ಸೇರುತ್ತಿದ್ದವು. ಮಳೆಗಾಲದಲ್ಲಿ ಮರಳೆಲ್ಲ ಕೊಚ್ಚಿ ಹೋಗುತ್ತಿದ್ದರಿಂದ ಆಗ ಮರಳು ಸಿಗುತ್ತಿರಲಿಲ್ಲ ಮತ್ತು ಆ ಕಾಲ ಅಪಾಯಕರವೂ ಆಗಿತ್ತು. ಮಳೆಗಾಲದಲ್ಲಿ ಕಲೀಲ ಮಡುವನ್ನು ಬಿಟ್ಟು ಊರೂರು ತಿರುಗುತ್ತಾ ಕೊಡೆ ರಿಪೇರಿ, ಹಳೆ ಬಾಟಲಿ, ಪೇಪರ್ ಖರೀದಿಸಲು ಹೋಗುತ್ತಿದ್ದ. ಒಮ್ಮೊಮ್ಮೆ ಕಲಾಯಿ ಹಾಕುವುದು ಇತ್ಯಾದಿ ಮಾಡಿದ್ದೂ ಇದೆ. ಆದರೆ ಇವೆಲ್ಲಾ ಜಾಸ್ತಿ ಆದಾಯವನ್ನೇನೂ ಕೊಡುತ್ತಿರಲಿಲ್ಲ. ಪೇಟೆಗೆ ಹೋದಾಗ ಸುಣ್ಣ-ತಂಬಾಕು ಖರ್ಚಿಗೆ, ಮಕ್ಕಳಿಗೆ ಬೆಂಡು ಬತ್ತಾಸು ಈ ರೀತಿ ಪುಡಿಗಾಸಿಗೆ ಉಪಯೋಗವಾಗುತ್ತಿತ್ತು. ಜನಗಳ ಜೊತೆ ಬೆರೆಯುವುದು, ಸಿಕ್ಕಾಪಟ್ಟೆ ಹರಟೆ ಹೊಡೆಯುವುದು ಕಲೀಲನ ಖಯಾಲಿಯಾಗಿತ್ತು. ಸದಾ ಹೆಂಡತಿ, ಇಬ್ಬರು ಮಕ್ಕಳು, ಮರಳು, ಬೆಣ್ಣೆ ಹೊಳೆ, ದೋಣಿಗಳ ಜೊತೆ ಕಾಲ ಹಾಕುತ್ತಿದ್ದ ಕಲೀಲನಿಗೆ ಮಳೆಗಾಲ ಜನರೊಂದಿಗೆ ಹರಟೆ ಕೊಚ್ಚಲು ಅವಕಾಶ ಮಾಡಿ ಕೊಡುತ್ತಿತ್ತು. ಒಮ್ಮೆ ಚಿಕ್ಕೆರೂರಿನ ಗೌಡ್ರ ಮನೆಯಲ್ಲಿ ಬ್ಯಾಟರಿ ರಿಪೇರಿ ಮಾಡಿದ್ದು ಕಂಡು ಗೌಡರು ಅವನಿಗೆ ಇನಾಮು ಎಂದು ಕಾಫಿ ಮಾಡಿಸಿ ಕೊಟ್ಟಿದ್ದರು. ಮೊದಲ ಗುಟುಕಿನಿಂದಲೇ ಅತೀ ಪ್ರಿಯವಾಯಿತು, ಕಾಫಿ ರುಚಿ ಕಲೀಲನ ಎಲ್ಲ ಇಂದ್ರಿಯಗಳಿಗೂ ನಾಟಿತ್ತು. ಸಮಯ ಸಿಕ್ಕಾಗಲೆಲ್ಲ ಕಲೀಲ ಊರೂರು ಅಲೆಯತೊಡಗಿದ, ಯಾರಯಾರದೋ ಮನೆಯಲ್ಲಿ ಚಿಲ್ಲರೆ ಕೆಲಸ ಮಾಡಿ ಕಾಫಿ ಕುಡಿಯತೊಡಗಿದ. ಗೌಡರು, ಪಟೇಲರ ಮನೆಯಲ್ಲಿ ಕಲೀಲನ ಒಳ್ಳೆಯ ಬುದ್ಧಿ, ಸಹಾಯ ಮಾಡುವ ಬುದ್ಧಿ ಎಲ್ಲಾ ನೋಡಿ ಅತಿಥಿಯ ಕಾಫಿ ಸತ್ಕಾರ ಚೆನ್ನಾಗೆ ನಡೆಸಿದರು. ಆಮೇಲೆ ಕಲೀಲನ ಹೆಸರು ಕಾಫಿ ಸಾಬ ಎಂದೇ ಬಿತ್ತು. ಕಲೀಲ ತನ್ನ ನಿಜವಾದ ಹೆಸರು ಏನು ಎಂಬುದನ್ನೇ ಮರೆತಿದ್ದ. ಖಲೀಲ್ ಸಾಬ್ ಎಂದೋ ಅಥವಾ ಖಲೀಲ್ ಮಹಮ್ಮದ್ ಅಂತ ಏನೋ ಇತ್ತು ನೆನಪಿಲ್ಲ ಅಂತ ಹಲ್ಲು ಕಿಸಿದು ತನ್ನ ಹೆಸರಿನ ಹಿಂದಿನ ಕಥೆ ಹೇಳುತ್ತಿದ್ದ.

ಈಗ್ಗೆ ಕೆಲ ವರ್ಷಗಳಿಂದ ಮರಳು ಬೇಡಿಕೆ ಜಾಸ್ತಿ ಆಗಿದೆ, ಕಲೀಲ ತಿಂಗಳು ಬೆಳಕಿನಲ್ಲೂ ಕೆಲಸ ಮಾಡತೊಡಗಿದ. ಸಮುದ್ರ ತೀರದ ಅಬಿಗೂರಿನಿಂದ ಹಿಡಿದು ಘಟ್ಟದ ಬುಡದ ಮೇರೂರಿನವರೆಗೂ ಗಿರಾಕಿಗಳು ಮರಳು ಒಯ್ಯುತ್ತಿದ್ದರು. ಮಗ ಸಮೀರ, ದೋಣಿಯ ಮೇಲೆನಿತ್ತು ಮರಳು ಬುಟ್ಟಿ ಎತ್ತಲು ಸಹಾಯ ಮಾಡಿದರೆ, ಮಗಳು ಫಾತಿಮಾ ದೋಣಿಗೆ ಹುಟ್ಟು ಹಾಕುತ್ತಿದ್ದಳು. ಫಾತಿಮಾಳಿಗೆ ಇಷ್ಟವಾದ ಕೆಲಸ ಅಂದರೆ ಗಾಣ ಹಾಕಿ ಮೀನು ಹಿಡಿಯುವುದು. ಅಣ್ಣ, ಅಪ್ಪ ಕೆಲಸ ಮಾಡುತ್ತಾ ಇದ್ದಾಗ , ಫಾತಿಮಾ ತದೇಕಚಿತ್ತದಿಂದ ಗಾಣ ನೋಡುತ್ತಾ ಕೂತಿರುತ್ತಿದ್ದಳು.

ಉತ್ತಿದರು ಆಟಂಬಾಂಬಿನ ಬೀಜಗಳನ್ನು...
ಹೀಗೆ ಒಂದು ದಿನ, ಚೌರದ ಭೈರ ಮಡುವಿನ ಹತ್ತಿರ ಬಂದು ಪಟೇಲರು ಬರ ಹೇಳಿದ್ದರೆಂದೂ ತುಂಬಾ ಅರ್ಜಂಟ್ ಎಂದೂ ಹೇಳಿ ಹೋದ. ಕಲೀಲ ಒಂದು ಕಾಫಿ ಗಿಟ್ಟಿಸಬುದೆಂದು ಯೋಚಿಸುತ್ತಾ ಪಟೇಲರ ಮನೆ ಸೇರಿದ. ಆದರೆ ಅವನಿಗೆ ಅಲ್ಲಿ ಬೇರೆ ಏನೋ ಒಂದು ಕಾದಿತ್ತು.

ಆಗ ತಾನೇ ನೆಲ್ಲೂರಿಗೆ ಬಂದ ರೇಡಿಯೋ ಯಾವುದೋ ಒಂದು ಕರಾಳ ಸುದ್ದಿಯನ್ನು ಹೇಳುತ್ತಿತ್ತು. ದೇಶದ ಪ್ರಮುಖ ಮುಖಂಡರೆಲ್ಲರೂ ಜೈಲು ಸೇರಿದ್ದಾರೆಂದೂ, ಪರಿಸ್ಥಿತಿ ಗಂಭೀರ ಎಂದು ಅರ್ಥ ಮಾಡಿಕೊಂಡ ಕಲೀಲ. ಅಬ್ಬ! ಎಂಥ ಘಾಟಿ ಹೆಂಗಸಪ್ಪ! ಅಂತ ಮನಸಲ್ಲೇ ಅಂದುಕೊಂಡ. ಪೇಟೆಗೆ ಹೋಗಬೇಡ, ಪೊಲೀಸರು ಹಿಡಿದು ಜೈಲಿಗೆ ಹಾಕಿದರೆ ಕೇಳುವರಿಲ್ಲ! ಎಂದು ಪಟೇಲರು ಎಚ್ಚರಿಸಿದರು.

ಪಟೇಲರಿಗೆ ಮೇಲಿಂದ ಆರ್ಡರ್ ಬಂದಿತ್ತು, ತೀರ್ಥಹಳ್ಳಿ ಶ್ಯಾಮರಾಯರು ಬಿಳೀ ಮಡುವನ್ನು ಹರಾಜಿಗೆ ಹಿಡಿದಿದ್ದರು, ಇನ್ನು ಮೇಲೆ ರಾಯರು ತಮ್ಮ ಕೆಲಸದವರಿಂದ ಮರಳು ತೆಗೆಸಿ ಬಿಸಿನೆಸ್ಸ್ ಶುರು ಮಾಡಲು ಪರವಾನಗಿ ಪಡೆದಿದ್ದರು. ತುಂಬಾ ವರ್ಷದಿಂದ ಕಲೀಲ ಅಲ್ಲಿ ಕೆಲಸ ಮಾಡಿದ್ದರಿಂದ ರಾಯರು ಕಲೀಲನನ್ನು ಕೆಲಸಕ್ಕೆ ಇಟ್ಟುಕೊಳ್ಳಲು ಒಪ್ಪಿದ್ದರು.

ಈ ವಿಷಯವನ್ನು ತಿಳಿದ ಕಲೀಲ ನಾಳೆ ಏನಾಗಬಹುದೆಂಬ ಅನುಮಾನವಿಲ್ಲದೆ .. ಮರಳ ದಿಣ್ಣೆಯ ಮೇಲೆ ಕುಳಿತು ,ತಾನು ಎಷ್ಟು ಮರಳು ಹೊರತೆಗೆದರೂ ಮತ್ತೆ ಉದ್ಭವವಾಗುವ ಮರಳಿನ ಅನಂತತೆಯ ಬಗ್ಗೆ ಯೋಚಿಸುತ್ತಾ, ಮರಳನ್ನು ತಂದು ಹಾಕಿದಬೆಣ್ಣೆ ಹೊಳೆ ಮತ್ತು ಮರಳನ್ನೊದಗಿಸಿದ ವಜ್ರಗಿರಿಯನ್ನು ಧನ್ಯತಾ ಭಾವದಿನದ ನೋಡುತ್ತಾ ಕುಳಿತಿದ್ದ. "ಈವತ್ತು ಯಾಕೋ ತುಂಬಾ ಚಳಿ!" ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ ಇನ್ನೊಂದು ಬೀಡಿ ಕೈಗೆತ್ತಿಕೊಂಡ.

ಈವತ್ತು ನೀವು ನೆಲ್ಲೂರಿಗೆ ಹೋದರೆ ಕಾಣುವುದು ಬೆಣ್ಣೆ ಹೊಳೆಯನ್ನೂ ಅಲ್ಲ, ಬಿಳೀ ಮಡುವನ್ನೂ ಅಲ್ಲ. ಬರೀ ಕೆಸರು ಗುಂಡಿ, ರಾಕ್ಷಸಾಕಾರದ ಜೆ ಸಿ ಬಿ ಗಳೂ, ಅರ್ತ್ ಮೂವರ್ ಗಳೂ, ಬೃಹದಾಕಾರದ ಲಾರಿಗಳೂ, ಗ್ರಾನೈಟ್ ಕೊಯ್ಯುವ ಯಂತ್ರಗಳೂ, ಕಲೀಲನ ಮನೆ ಇದ್ದ ಜಾಗದಲ್ಲ್ಲಿ ಈಗ ದೊಡ್ಡ ಮೈನಿಂಗ್ ಕಂಪನಿ ಆಫೀಸು. ಹೊಳೆಗೆ, ಮಡುವಿಗೆ ಹೆಸರು ಹೇಗೆ ಬಂದಿರಬಹುದೆಂಬ ಊಹೆ ಕೂಡ ಮಾಡಲಾರಿರಿ. ಅಷ್ಟಕ್ಕೂ ಈ ಊಹೆ ಮಾಡಿ ಯಾರಿಗೆ ಏನಾಗಬೇಕಾಗಿದೆ?
ಕಲೀಲ, ಬೆಣ್ಣೆ ಹೊಳೆ, ವಜ್ರಗಿರಿ, ಬಿಳೀ ಮಡುವು, ಫಾತಿಮಾಳ ಗಾಣ..... ಎಲ್ಲಾನೂ ಕಾಲನ ಪರದೆಯ ಹಿಂದೆ ಮಾಯವಾಗಿವೆ. ಮುಂದೆ ಏನಾಗುತ್ತೋ ಕಾದು ನೋಡೋಣ.

ಹೆಳವನ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೋ ನೋಡಬೇಕು.......

3 comments:

  1. ಅದ್ಭುತವಾಗಿ ಇದೆ ಕಣೋ ...

    ಪ್ರಕೃತಿಯ ಅತ್ಯಾಚಾರ ನಡೀತಾ ಇದೆ..ಹೇಳೋರು ಕೇಳೋರು ಯಾರು ಇಲ್ಲಾ ..ಅದು ಯಾರಿಗೂ ಬೇಕಿಲ್ಲಾ ....ಜನ ಸ್ವಾರ್ಥಿಗಳಾಗಿ ಹೋಗಿದಾರೆ..ತುಂಬಾ ಬೇಜಾರು ಮಗ...ಮುಂದೆ ಹೇಳಕೆ...ಥ್ಯಾಂಕ್ಸ್

    ReplyDelete
  2. ಅದ್ಬುತವಾಗಿ ಇದೆ ಕಣೋ..
    ಹಿಂಗೆ ವರ್ಷಕೊಂದು ಬರಿತ ಇರು ಆಯ್ತಾ :)

    ReplyDelete
  3. ನಿಜ. ಮರಳು ಕದಿಯುವ ದುರುಳರು
    ಹರಳಿಗೆ ಮರುಳಾಗಿದ್ದಾರೆ. ಇಂದು ಸರಳವಾಗಿ
    ಕಾಣುವ ಇದು ಮುಂದೆ ಕೊರಳ ಕೊಯ್ಯದೆ ಇರದು ಸರ್ವಜ್ಞ.

    ReplyDelete