Monday, October 13, 2014

ಅಬಸಿ ಸಮಾಚಾರ - ೨


ಇದು ನಾ ಕಂಡ ನಮ್ಮೂರಿನ ಒಂದು ದೊಡ್ಡ ಐರನಿ -  ಮಳೆ ಮಾಪನ ವಿಧಾನ.

ನಮ್ಮೂರಿನ ಜನಕ್ಕೆ ಈ ಸಾಲುಗಳು ತೀರಾ ಸಾಮಾನ್ಯ.

'ಈ ವರ್ಷ ಸಿಕ್ಕಾಪಟ್ಟೆ ಮಳೆ, ೨ ತಿಂಗಳು ಯಾವುದೇ ಕಾರ್ ಬಂದರೂ, ಊರ್ ಬಾಗಿಲ ರಸ್ತೆಯಲ್ಲಿ ಹುಗಿದು, ಕೆಸರು ಕುಡಿದ ಮೇಲೆ ಒಳಗಡೆ ಪ್ರವೇಶ, ಗೊತ್ತ? ನೀವೇ ಲೆಕ್ಕ ಹಾಕಿ ಎಷ್ಟು ಮಳೆ ಈ ವರ್ಷ '

'ಹೋದ ವರ್ಷ ಮಳೆನೇ ಇಲ್ಲ, ನಮ್ಮೂರ ರಸ್ತೆಲಿ ಜೌಳು ಆಗಿದ್ದೇ ನೋಡಿಲ್ಲ,'

'ನಿನ್ನೆ ಸಂಜೆ ಎಂಥಾ ಮಳೆ ಅಂತೀರಿ! ೨ ಕಾಲುವೆ, ರಸ್ತೆ ಏಕ ಆಗಿ ತುಂಬಿ, ನೀರು ಚಹಾ ಥರ ಹರೀತಿತ್ತು'

ಈ ಮಳೆಗಾಲದಲ್ಲಿ ಅಬಸಿಯ ಈ ಒಂದೇ ಒಂದು ರಸ್ತೆ ಎಷ್ಟು ಹಾಳಾಗಿದೆ? ಎಷ್ಟು ಕಾರ್, ಲಾರಿಗಳು ಕೆಸರಿನಲ್ಲಿ ಹೂತು ವರಗುಟ್ಟುತ್ತ ಒದ್ದಾಡಿದವು? ಊರಿನ ಬಾಗಿಲಿನ ಮುಂದಿನ ಇಳುಕಲು ಎಷ್ಟು ತಿಂಗಳು ಕೆಸರು ತುಂಬಿ ನಿಂತಿತ್ತು? ರಸ್ತೆ ಕೆಸರಿನಲ್ಲಿ ಎಷ್ಟು ಜನ ಬಿದ್ದು ಎದ್ದರು? ಹೋದ ವರ್ಷ ಹಾಕಿದ ಮಣ್ಣು ತೊಳೆದು ಹೋಗಿ ಕಲ್ಲುಗಳೆಲ್ಲ ಮೇಲೆ ಬಂದಿವೆಯೇ ಇಲ್ಲವೇ? ಇವು ಎಲ್ಲಾ ನಮ್ಮೂರಿನ ಮಳೆಗಾಲದ ಪ್ರಮಾಣಗಳು.

ನಮ್ಮೂರಿನ ದುರಂತ ಇದು, ದುರಂತವಲ್ಲದೇ ಇನ್ನೇನು? ಮಂಗಳ ಗ್ರಹಕ್ಕೆ ಸೇತುವೆ ಕಟ್ಟಿದ ನಾವು ಕನಿಷ್ಠ ಒಂದು ೫ ವರ್ಷ ಬಾಳುವ ರಸ್ತೆ ಹಾಕಲು ಅಸಾಧ್ಯ ಅಂದರೇನರ್ಥ? ಅಥವಾ ನಾವು ೨ ಕೀ ಮೀ ಉತ್ತಮ ರಸ್ತೆ ಹೊಂದಲೂ ಅನರ್ಹರೆ?

ಈ ಸಾರಿ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ ಆಶ್ವಾಸನೆಯಂತೆ ಎಲ್ಲಾ ಸರಿಯಾಗಿ ನಡೆದರೆ ೫೦೦೦೦ ರೂ ಉಪಯೋಗಿಸಿ ರಸ್ತೆ ಮೋರಿಗಳನ್ನಾದರೂ  ಕಟ್ಟುತ್ತಾರೋ ನೋಡಬೇಕು. PDO ತಮ್ಮ paternal leave ಮುಗಿಸಿ ಬೇಗ ಬಂದು ಈ ಕೆಲಸ ಕೈಗೆತ್ತಿಕೊಳ್ಳುತ್ತಾರೆಂದು ಆಶಿಸೋಣ.

ಅಬಸಿಯ ರಸ್ತೆಯ ಕೊಚ್ಚೆ, ಧೂಳುಗಳ ನಡುವೆ ನೀವು ನಾಲ್ಕು ದಿನ ನಡೆದು  ಸೂಕ್ಷ್ಮವಾಗಿ ಗಮನಿಸಿದರೆ ಒಂದು ವಿಷಯ ನಿಮಗೆ ಆಶ್ಚರ್ಯಪದಿಸುತ್ತದೆ. ಅಬಸಿಯಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ದನಕರುಗಳಿರಬಹುದು, ನಮ್ಮ ಹಾಗೆ ಈ ದನಕರುಗಳಿಗೂ ಇರುವುದೊಂದೇ ರಸ್ತೆ, ಮತ್ತು ಇಲ್ಲಿ ಯಾವ ಹಸುಗಳಿಗೂ ಶೌಚಾಲಯದ ಪ್ರಜ್ಞೆ ಇನ್ನೂ ಇದ್ದಂತಿಲ್ಲ, ಹಾಗಾಗಿ ಬೆಳಿಗ್ಗೆ ಮೇವಿಗೆ ಹೊರಟಾಗ ಎಲ್ಲಾ ಹಸುಗಳೂ ರಸ್ತೆಯನ್ನು ಬೇಕಾಬಿಟ್ಟಿ ಉಪಯೋಗಿಸಲು ಸ್ವಲ್ಪವೂ ಹಿಂಜರಿಯುವುದಿಲ್ಲ, ಅಥವಾ ಅವುಗಳು ನಮ್ಮೂರ ರಸ್ತೆಯ ಮಟ್ಟವನ್ನು ಸರಿಯಾಗಿ ಅಳೆದು ಯೋಗ್ಯ ರೀತಿಯಲ್ಲಿ ಈ ಮೂಲಕ ಉಪಯೊಗಿಸುತ್ತಿದ್ದಿರಬಹುದು. ನೆಲಕ್ಕೆ ಬಿದ್ದ ಸೆಗಣಿ ಹಸುಗಳ ಕಾಲ್ತುಳಿತ, ಮಳೆ, ಗಾಳಿಗಳಿಂದ ಇನ್ನೂ ಹರಡಿ ಗಲೀಜು ಸುಲಭವಾಗಿ ಹರಡಬಹುದಿತ್ತು. ಆದರೆ ಆಶ್ಚರ್ಯ ಎಂದರೆ ರಸ್ತೆ ಮೇಲೆ ಒಂಚೂರೂ ಸೆಗಣಿ  ಕಾಣುವುದಿಲ್ಲ.

ಇದಕ್ಕೆ ಕಾರಣ ಬೇರೆ ಯಾರೂ ಅಲ್ಲ - ನಮ್ಮೂರಿನ ದೇವಮ್ಮ. ನಾನು ನೋಡಿದಂತೆ ಕಳೆದ ೧೦-೧೫ ವರ್ಷಗಳಿಂದ ಅವಿರತವಾಗಿ ದಿನಾ ಬೆಳಿಗ್ಗೆ ಹಸುಗಳು ಮೇವಿಗೆ ಹೊರಡುವ ವೇಳೆಯನ್ನು ಕಾದು ಬುಟ್ಟಿ ತುಂಬಾ ಸೆಗಣಿ ಹೆಕ್ಕಿ ತನ್ನ ಗೊಬ್ಬರದ  ಗುಂಡಿ ತುಂಬಿಸುತ್ತಾಳೆ. ದೇವಮ್ಮನ ಕೊಟ್ಟಿಗೆ ಗೊಬ್ಬರಕ್ಕೆ ಈ ದಿನಗಳಲ್ಲಿ ತುಂಬಾ ಬೇಡಿಕೆ, ದನ ಕರುಗಳ ಸಂಖ್ಯೆ ನಿಧಾನವಾಗಿ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರದ supply ಕಡಿಮೆ,  naturally ಬೇಡಿಕೆ ಜಾಸ್ತಿ.  ದೇವಮ್ಮನ business model ಸಾಲಿಡ್! ಆದರೆ ದೇವಮ್ಮ ದುಡ್ಡು ಸಂಪಾದಿಸಲು ಸೆಗಣಿ ಹೆಕ್ಕುತ್ತಾಳೆಯೆ? ಯಾರಿಗಾಗಿ ಸಂಪಾದಿಸಬೇಕು? ನಾನು ನೋಡಿದಂತೆ ದೇವಮ್ಮ ತುಂಬಾ ಮುಂಚಿನಿಂದಲೂ ಒಂಟಿ ಹೆಂಗಸು, ವಯಸ್ಸಾದರೂ ಬೇರೆ ಮನೆಗೆ ಹೋಗುವುದಿಲ್ಲ, ಸಂಬಂಧಿಕರೆಂದು ಬೇರೆ ಊರಿಗೆ ಹೋಗಿದ್ದಂತೂ ಇಲ್ಲವೇ ಇಲ್ಲ. ಹಿಂದೆಲ್ಲಾ ತನ್ನ ಬೊಂಬಾಯಿಗೆ ಫೇಮಸ್, ಇತ್ತೀಚೆಗೆ ಕೂಗಾಡಿದ್ದನ್ನು ಕೇಳಿಲ್ಲ, ಯಾರ ಮೇಲೆ ಕಿರುಚಾಡಿಯಾಳು? ಅಥವಾ ಜಗಳ ಕಾಯುವ ಮನಸ್ಸಿದ್ದರೂ ವಯಸ್ಸು ಶಕ್ತಿಯನ್ನು ಕೊಡುತ್ತಿಲ್ಲವೇನೋ? ಅದೇನೇ ಇದ್ದರೂ ಸೆಗಣಿ ಹೆಕ್ಕುವುದರಲ್ಲಿ ಎದೆಗುಂದಿಲ್ಲ,
ನಮ್ಮೂರನ್ನು ಸ್ವಚ್ಛವಾಗಿಡಬೇಕೆಂಬ ಪ್ರೇರಣೆ ಇರಬಹುದೆ?  ನಮ್ಮವರಲ್ಲಿ ಹಲವರಿಗೆ ಸೆಗಣಿಯೇ sacred ಆಗಿರುವಾಗ ಸೆಗಣಿ ಮುಕ್ತ ರಸ್ತೆ ಎಂಬ ಕಲ್ಪನೆಯನ್ನು ದೇವಮ್ಮ ಮಾಡಿರಲಾರಳು.

ಒಮ್ಮೆ ಕೊಟ್ಟಿಗೆಗೆ ಹೋಗಿ ಬಂದರೆ ೨ ಸಾರಿ ಕೈ ಕಾಲು ತೊಳೆಯುವ ನಾನು, ಸೆಗಣಿ ಆರಿಸುವವರಿಗೆ ಅದ್ಯಾವ ಪ್ರೇರಣೆ ಎಂದು ಆಶ್ಚರ್ಯ ಪಡುತ್ತಿದ್ದೆ. ದೇವಮ್ಮಗೆ 'ಸ್ವಚ್ಚ ಭಾರತ' project ಖಂಡಿತ ತಲುಪಿರಲಾರದು. ಸ್ವಚ್ಚ ಭಾರತ ಹಾಗಿರಲಿ ಅವಳಿಗೆ ಭಾರತದ ಕಲ್ಪನೆ ಇದೆಯೇ? ನಮ್ಮೂರನ್ನು ಸ್ವಚ್ಚವಾಗಿಡಬೇಕೆಂಬ ಆಶಯ ಕೂಡ ಇಲ್ಲವೇನೋ. ಆದರೆ ಕ್ಯಾಮೆರಾ ಎದುರಿಗೆ ಗಾಂಧಿ ಹೆಸರಲ್ಲಿ ಪೊರಕೆ ಹಿಡಿಯುವ celebrityಗಳು ಕಳೆದ ೧೦-೧೫ ವರ್ಷಗಳಿಂದಲೂ ಅವಿರತವಾಗಿ ಒಂದು ದಿನವೂ ತಪ್ಪದೆ ದುಡಿದ ದೇವಮ್ಮನೆದುರು ಕ್ಷುಲ್ಲಕ ಅಲ್ಲವೆ? ಯಾವುದೋ ಹೊಸ project ಗೆ ambassador ಎಂದುಕೊಳ್ಳುತ್ತ 'ದೇಶ ಪ್ರೇಮ'ದಿಂದ ಬೀಗುವವರಿಗಿಂತ ದೇಶ, ಕಾಲಗಳ ಪರಿವೆ ಇಲ್ಲದೆಯೇ ಅದಾವ ಶೂನ್ಯದಿಂದ ಪಡೆದ ಪ್ರೇರಣೆಯ ಫಲವೇ ಅಮೂಲ್ಯ ಅಲ್ಲವೇ?

ಈ ಹೊತ್ತು ದೇವಮ್ಮಗೆ thanks ಹೇಳಬೇಕು ಅನಿಸಿದರೆ ಅಬಸಿಯ ತನಕ ಬರುವ ಅವಶ್ಯಕತೆ ಇಲ್ಲ, ಅಲ್ಲೇ ನಿಮ್ಮ ಆಸು ಪಾಸು ಕಣ್ತೆರೆದು ನೋಡಿ. 

Sunday, August 31, 2014

ಅಬಸಿ ಸಮಾಚಾರ


ಅಬಸಿಯಲ್ಲಿ ಈ ವರ್ಷ ಎಲ್ಲಿ ನೋಡಿದರೂ ಬಿದಿರು ಅಕ್ಕಿ ಸಂಬ್ರಮ. Feb ವರೆಗೂ ತಿಳಿ ಹಳದಿ ಹೂವಿನಿಂದ ಕಂಗೊಳಿಸುತ್ತಿದ್ದ ಬಿದಿರು ಮಟ್ಟಿಗಳು ಈಗ ಎಲ್ಲ ಸತ್ತು ನಿಂತಿವೆ. ಇನ್ನೂ ಉಳಿದ ಕೆಲವು ಮುಂದಿನ ವರ್ಷ ಹೂ ಬಿಟ್ಟು ನೆಲ ಕಚ್ಚ್ಚುತ್ತವೆ. 

ಬಿದಿರು ಹೂ ಬಿಟ್ಟರೆ ಕ್ಷಾಮ ಅಂತ ಹೇಳ್ತಾರೆ - ಈ ಮಾತು ವೈಜ್ಞಾನಿಕವಾಗಿರಲಾರದೇನೋ!  ಆದರೆ ಸತ್ತು ನಿಂತ ೫೦ ಅಡಿ ಎತ್ತರದ ಈ ಲಕ್ಷಾಂತರ ಬಿದಿರು ಮಟ್ಟಿಗಳು ಬೇಸಿಗೆ ಕಾಡಿನ ಬೆಂಕಿಗೆ ಹೇಳಿ ಮಾಡಿಸಿದ ಕ್ಯಾಟಲಿಸ್ಟ್.  ಒಣಗಿ ನಿಂತ ಬಿದಿರು ಸುಲಭವಾಗಿ ಸುದುವುದಷ್ಟೇ ಅಲ್ಲದೆ ಅಷ್ಟೆತ್ತರದ ಜ್ವಾಲೆಗಳ ಕಿಡಿಗಳು ಗಾಳಿಯಲ್ಲಿ ಬಹು ಬೇಗ ಹರಡಲು ಸಹಾಯ ಮಾಡುತ್ತವೆ. ಆಧುನಿಕ ಕಾಲದ ಅಬಸಿ ಇಂದೂ ಬಿದಿರಿನ ಮೇಲೆ ಹೇರಳವಾಗಿ ಅವಲಂಬಿತವಾಗಿರುವುದು ಆಶ್ಚರ್ಯ ಆದರೂ ನಿಜ. ಗಳಗಳು ಮತ್ತು ಬೇಲಿ ಬಹು ಮುಖ್ಯ ಉಪಯೋಗ. ನಮ್ಮೂರಿನ ಛಿದ್ರ ಛಿದ್ರಗೊಂಡ ಗದ್ದೆ, ತೋಟ, ಬ್ಯಾಣಗಳು ಪ್ರತೀ ವರ್ಷ ಬೇಲಿಯಿಂದ ಒಳಗೊಳ್ಳಲೇಬೇಕು. ಎಕರೆಗೆ ಕಡಿಮೆ ಎಂದರೂ ೨೫೦ ಮೀ ಬೇಲಿ.  ಗದ್ದೆ ಬೇಲಿ, ಹೊಮ್ಮಂಡದ ಬೇಲಿ, ಗದ್ದೆ ಬೇಲಿ, ಅಡಿಕೆ ತೋಟದ ಬೇಲಿ, ಮನೆ ಸುತ್ತ ಬೇಲಿ, ಹೂವಿನ ಗಿಡಗಳ ಸುತ್ತ, ಬ್ಯಾಣದ ಬೇಲಿ, ಅನಾನಸ್ ಬ್ಯಾಣದ ಕರೆಂಟ್ ಬೇಲಿ, ಅರಿಶಿನ, ಶುಂಠಿ ಬೇಲಿ, ಕಾಲ್ದಾರಿಗೆ ಬೇಲಿ, ಒಂದೇ ಎರಡೇ .. .     ಬಿದಿರಿನ ಗೂಟ, ಮುಳ್ಳು ಹ್ಯಾಡಗಳು ಎಷ್ಟು ಬೇಕಾಗುತ್ತವೋ ಯಾರು ಲೆಕ್ಕ ಮಾಡಿದವರು! ಬಿದಿರು ಅಕ್ಕಿಯಿಂದ ಮತ್ತೆ ಬಿದಿರು ಬೆಳೆದು ನಿಲ್ಲಲು ಕಡಿಮೆ ಎಂದರೂ ಇನ್ನು ೮ ವರ್ಷ ಬೇಕು. ಅಲ್ಲಿಯವರೆಗೆ ಬಿದಿರು ಅಲಭ್ಯ, ಶೂನ್ಯ. ಕಾಡಿನ ಬೇರೆ ಗಿಡ ಮರ ಮುಳ್ಳು ಗಿಡಗಳ ಮೇಲೇ  ಅವಲಂಬಿತವಾಗಬೇಕು, ಅವು ಬೆಂಕಿಗೆ ಸಿಗದೇ ಉಳಿದಿದ್ದರೆ! 

ಇನ್ನು ಈ ಬಿದಿರು ಅಕ್ಕಿ ತಿಂದು ಇಲಿ ಸಂತತಿ ಜಾಸ್ತಿ ಆಗುತ್ತಂತೆ, ನಿಜವೇ ಆದರೆ - ಬೆಳೆದ ಬತ್ತ ಎಷ್ಟು ಉಳಿಯುತ್ತದೋ ಕಾದು ನೋಡಬೇಕು.  

ಇದೆಲ್ಲಾ ಕಥೆ ಅಬಸಿಯಂತಹ ಚಿಕ್ಕ ಗ್ರಾಮದ್ದು. ಊಹೆಗೂ ನಿಲುಕದಷ್ಟು ಹಳ್ಳಿಗಳ ಅವುಗಳದೇ ಆದ ಸಂಕೀರ್ಣ ಜಗತ್ತಿನ ಏನಲ್ಲಾ ಕಥೆಗಳನ್ನು ಯಾರು ಹೇಳುವವರು? 

ಕಾಡಿನ ಮೇಲೆ ಅವಲಂಬಿತವಾಗದೇ, ಕಬ್ಬಿಣದ ಗಳಗಳು, ತಂತಿ ಬೇಲಿ ಪರಿಹಾರ ಖಂಡಿತ ಸಾಧ್ಯ.  ಆದರೆ ಬಂಡವಾಳ? "ಬೇಲಿ ಸಾಲ" ಅಂತ ಏನಾದರೂ ನಿಮ್ಮ ತಲೆಯಲ್ಲಿ ಪರಿಹಾರ ಬಂದರೆ ಖಂಡಿತ ಮರೆತುಬಿಡಿ. ನಮ್ಮ ಸರ್ಕಾರಗಳು ಇಕಾಲಜಿ ಅಂತಹ ಸೂಕ್ಷ್ಮ ವಿಷಯಗಳಿಗೆ ಸ್ಪಂದಿಸಲು ಕಲ್ಪನೆಯಲ್ಲೂ ಸಾಧ್ಯವಿಲ್ಲ. ಬಿದಿರು ಹೂ ಆಗುವಂತಹ ವಿದ್ಯಮಾನ ಸರ್ಕಾರಗಳ grand scheme of  things ಹೇಗೆ ಒಳಗೊಳ್ಳುತ್ತದೆ?  

*******************************************************************************
ಈಗೆಲ್ಲಾ  ಇದು ಸಾಮಾನ್ಯ, ಈ ಥರದ ಸುದ್ದಿಗಳು ವಾರಕ್ಕೆರಡು ಬರುತ್ತಲೇ ಇರುತ್ತವೆ. ಒಂದು ಕಡೆ ಗಾಡ್ಗೀಳ್ vs ಕಸ್ತುರಿರಂಗನ್, ಇನ್ನೊಂದು ಕಡೆ ಮಾಳಿನ್  landslide, US ನಲ್ಲಿ ಬಾಡಿಗೆ ಜೇನು ನೊಣಗಳು..  ಹೀಗೆ ಹಲವಾರು. ನಮ್ಮ ಹಸಿವು ಹೆಚ್ಚ್ಚಾದಂತೆ ಪ್ರಕೃತಿ ವಿಕೋಪ, ಸೊಜಿಗಗಳು ಹೆಚ್ಚುತ್ತಿವೆ, ಈ ಥರದ ನ್ಯೂಸ್ ಓದಲು ನಾವು ತಯಾರಿರಬೇಕು ಅಷ್ಟೇ. ಆದರೆ ಕಳೆದ ಸೋಮವಾರದ ಪ್ರಜಾವಾಣಿ ಲೇಖನ ಅಳಿವಿನ ಅಂಚಿನಲ್ಲಿ ಅಶೋಕ ವೃಕ್ಷ ನನಗೆ ಬರೀ ಮಗದೊಂದು 'ಇಕಾಳಜಿ' ಲೇಖನ ಆಗಿರಲಿಲ್ಲ, 

ಏಕೆಂದರೆ ಇದು ಅಬಸಿ ಕನೆಕ್ಷನ್, ನಮ್ಮೂರಿನ ಬಹುಷಃ ಎಲ್ಲರಿಗೂ ರಾಮೇಶ್ವರ ಕಾನಿನ ಅಶೋಕ ಮರಗಳ ಬಗ್ಗೆ ಗೊತ್ತಿರುತ್ತದೆ.  ಕೆಲವರು ನೋಡಿರಲೂಬಹುದು. ನಮ್ಮೂರಿನ ಕಾಡೆನೋ ಒಳ ಹೋಗಲಾರದ ಅಭೇದ್ಯ ಕಾಡೆನೋ ಅಲ್ಲ, ತರಚು ಗಾಯಗಳಿಗೆ ಹೆದರಿ ಅಥವಾ ದಾರಿ ಗೊತ್ತಿಲ್ಲದೇ ಹಲವರು ಈ ಅಶೋಕ ಮರಗಳನ್ನು ನೋಡಿರುವುದಿಲ್ಲ. ಕಾಡಿನ ಮಧ್ಯ ಭಾಗದಲ್ಲಿರುವ ಈ ವೃಕ್ಷಗಳನ್ನು ನೋಡಿದರೆ ಆಶ್ಚರ್ಯ ಸಹಜ, ಬೇರೆ ಎಲ್ಲೂ ಕಾಣದ ಈ 'ಶೋ' ಮರಗಳು ಇಲ್ಲಿ ಮಾತ್ರ ಯಾಕೆ ಇವೆ? ಇವು ಇರುವ ಲ್ಯಾಂಡ್ಸ್ಕೇಪ್ ಕೂಡ ತಗ್ಗು ಉಬ್ಬುಗಳಿಂದ ಕೂಡಿದ ಪ್ರದೇಶ - ಬಹುಷಃ ಈ ಕೆಲವು ಕಾರಣಗಳು ಅಶೋಕ ಮರಗಳಿಗೆ myth touch ಕೊಟ್ಟಿವೆ ಕೂಡ. ರಾಮ, ಈಶ್ವರ, ಅಶೋಕ ಮರಗಳು ಎಂದು ಕನೆಕ್ಷನ್ ತಂದಿಟ್ಟರೆ ಒಂದು ರೀತಿಯಲ್ಲಿ ಒಳ್ಳೆಯದೇ, ಕಾಲ್ಪನಿಕವೋ, ನಿಜವೋ! ಅಂತೂ ರಾಮ, ಈಶ್ವರನ ಪೂಜೆಗಾಗಿ ನೆಟ್ಟ ಗಿಡಗಳು ಎಂದು ಹೇಳಿದರೆ ಅದೂ ಒಂದು ಮಟ್ಟಿನಲ್ಲಿ conservation! ಅಲ್ಲವೇ. ಯಾರಿಗೆ ರಾಮ, ಈಶ್ವರರ ಮೇಲೆ ನಿಯತ್ತು? ಅನ್ನೋ ಪ್ರಶ್ನೆ ಬೇರೆಯೇ ಬಿಡಿ. 

ನಿಶ್ನೆ(ದಾಲ್ಚಿನ್ನಿ) ಗೆ ಸಿಕ್ಕಾಪಟ್ಟೆ ರೇಟ್ ಬಂದಾಗ ಮರಗಳನ್ನು ಸ್ವಾಹ ಮಾಡಿಲ್ಲವೇ? ಕಾಡು ನೆಲ್ಲೀ ಮರಗಳು ಎಷ್ಟೋ ನಾಪತ್ತೆ ಆಗಿಲ್ಲವೇ? ಇನ್ನು ಮುಂದೆ ಅಶೋಕ ಮರಗಳ ಸರದಿಯೇ?

E-TV ಯ ನಮಸ್ಕಾರದಲ್ಲಿ ತೇಜಸ್ವಿ ಹೇಳಿದ್ದು ಎಷ್ಟು ನಿಜ - "once we start interpreting forests in terms of money..... ", ಅಶೋಕ ಮರಗಳನ್ನು ಔಷಧೀಯ ಸಸ್ಯ, ಬೆಲೆ ಬಾಳುವ ಅಂತ ವಿಂಗಡಿಸಿದ ಕೂಡಲೇ ಅದರ ವಿನಾಶ ಎಂದರ್ಥ. 

ಬಿದಿರು ಹೂ ಬಿಡುವುದು ಸಹಜ;  ಪ್ರಕೃತಿಯ ಮೇಲೆ ಮಾನವನ ಒತ್ತಡ ಕೂಡ ಹೊಸದಲ್ಲ, ಇದಕ್ಕೆಲ್ಲ ಪ್ರಕೃತಿ ತನ್ನಷ್ಟಕ್ಕೆ ಉತ್ತರ ಕಂಡುಕೊಳ್ಳುತ್ತದೆ ಎನ್ನುವುದೊಂದು  ವಾದ, ಕಾಡು ನಾಶವಾದ ಜಾಗದಲ್ಲಿ ಲಂಟಾನ, ಚದುರಂಗ ಬೆಳೆದು green cover ಸಮತೋಲನವನ್ನು ಪ್ರಕೃತಿ ತನ್ನಷ್ಟಕ್ಕೇ ಸಾಧಿಸಿಲ್ಲವೇ ಹಾಗೆ. ಕಾದು ನೋಡಬೇಕಷ್ಟೇ! 

ಸರಾಸರಿ ೬೦ ವರ್ಷಕ್ಕೊಮ್ಮೆ ನಡೆಯುವ ಈ ವಿದ್ಯಮಾನವನ್ನು ಇನ್ನೊಮ್ಮೆ ನೋಡಲು ನಾನಂತೂ ಇರುವುದಿಲ್ಲ. ಮುಂದಿನ ಬಿದಿರು ಯುಗದ ಅಂತಿಮ ದಿನಗಳನ್ನು ನೀವು ನೋಡಿದ್ದೇ ಆದರೆ ಸಮಾಚಾರಗಳನ್ನು ನನಗೂ ಹೇಳಿ! 

********************************************************************************

ಅಬಸಿಗೆ ಅಬಸಿ ಅಂತ ಯಾಕೆ ಹೆಸರು ಬಂತು? ನನ್ನ ದೋಸ್ತ್ ಶಶಿಯ explanation ಕೆಳಲೇಬೇಕು. 

೧೮೧೦ರ ಸುಮಾರು, ಗ್ರೇಟ್ ಟ್ರಿಗೊನೊಮೆತ್ರಿಕ್ ಸರ್ವೇಯಲ್ಲಿ ಈ ಪುಟ್ಟ ಹಳ್ಳಿ ಎದುರಾಯ್ತು. ಹೆಸರು ಗೊತ್ತಿಲ್ಲದೇ ಇರುವ ಹಳ್ಳಿಗೆ ಸದ್ಯಕ್ಕೆ ಇರಲಿ ಅಂತ ABC ಅಂತ ಮಾರ್ಕ್ ಮಾಡಿದರು, ಆಲ್ಜೀಬ್ರಾದಲ್ಲಿ x,y,z ಗಳನ್ನು ಬಳಸುತ್ತೆವಲ್ಲವೕ ಹಾಗೆ. ಇದೇ ಕಾಲಾನಂತರ ಅಬಸಿ. 
ಶಶಿಯ ಈ sensational discovery ನಿಮಗೆ ಇಷ್ಟವಾದರೆ ಮರೆಯದೆ ತಿಳಿಸಿ.