Monday, October 13, 2014

ಅಬಸಿ ಸಮಾಚಾರ - ೨


ಇದು ನಾ ಕಂಡ ನಮ್ಮೂರಿನ ಒಂದು ದೊಡ್ಡ ಐರನಿ -  ಮಳೆ ಮಾಪನ ವಿಧಾನ.

ನಮ್ಮೂರಿನ ಜನಕ್ಕೆ ಈ ಸಾಲುಗಳು ತೀರಾ ಸಾಮಾನ್ಯ.

'ಈ ವರ್ಷ ಸಿಕ್ಕಾಪಟ್ಟೆ ಮಳೆ, ೨ ತಿಂಗಳು ಯಾವುದೇ ಕಾರ್ ಬಂದರೂ, ಊರ್ ಬಾಗಿಲ ರಸ್ತೆಯಲ್ಲಿ ಹುಗಿದು, ಕೆಸರು ಕುಡಿದ ಮೇಲೆ ಒಳಗಡೆ ಪ್ರವೇಶ, ಗೊತ್ತ? ನೀವೇ ಲೆಕ್ಕ ಹಾಕಿ ಎಷ್ಟು ಮಳೆ ಈ ವರ್ಷ '

'ಹೋದ ವರ್ಷ ಮಳೆನೇ ಇಲ್ಲ, ನಮ್ಮೂರ ರಸ್ತೆಲಿ ಜೌಳು ಆಗಿದ್ದೇ ನೋಡಿಲ್ಲ,'

'ನಿನ್ನೆ ಸಂಜೆ ಎಂಥಾ ಮಳೆ ಅಂತೀರಿ! ೨ ಕಾಲುವೆ, ರಸ್ತೆ ಏಕ ಆಗಿ ತುಂಬಿ, ನೀರು ಚಹಾ ಥರ ಹರೀತಿತ್ತು'

ಈ ಮಳೆಗಾಲದಲ್ಲಿ ಅಬಸಿಯ ಈ ಒಂದೇ ಒಂದು ರಸ್ತೆ ಎಷ್ಟು ಹಾಳಾಗಿದೆ? ಎಷ್ಟು ಕಾರ್, ಲಾರಿಗಳು ಕೆಸರಿನಲ್ಲಿ ಹೂತು ವರಗುಟ್ಟುತ್ತ ಒದ್ದಾಡಿದವು? ಊರಿನ ಬಾಗಿಲಿನ ಮುಂದಿನ ಇಳುಕಲು ಎಷ್ಟು ತಿಂಗಳು ಕೆಸರು ತುಂಬಿ ನಿಂತಿತ್ತು? ರಸ್ತೆ ಕೆಸರಿನಲ್ಲಿ ಎಷ್ಟು ಜನ ಬಿದ್ದು ಎದ್ದರು? ಹೋದ ವರ್ಷ ಹಾಕಿದ ಮಣ್ಣು ತೊಳೆದು ಹೋಗಿ ಕಲ್ಲುಗಳೆಲ್ಲ ಮೇಲೆ ಬಂದಿವೆಯೇ ಇಲ್ಲವೇ? ಇವು ಎಲ್ಲಾ ನಮ್ಮೂರಿನ ಮಳೆಗಾಲದ ಪ್ರಮಾಣಗಳು.

ನಮ್ಮೂರಿನ ದುರಂತ ಇದು, ದುರಂತವಲ್ಲದೇ ಇನ್ನೇನು? ಮಂಗಳ ಗ್ರಹಕ್ಕೆ ಸೇತುವೆ ಕಟ್ಟಿದ ನಾವು ಕನಿಷ್ಠ ಒಂದು ೫ ವರ್ಷ ಬಾಳುವ ರಸ್ತೆ ಹಾಕಲು ಅಸಾಧ್ಯ ಅಂದರೇನರ್ಥ? ಅಥವಾ ನಾವು ೨ ಕೀ ಮೀ ಉತ್ತಮ ರಸ್ತೆ ಹೊಂದಲೂ ಅನರ್ಹರೆ?

ಈ ಸಾರಿ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ ಆಶ್ವಾಸನೆಯಂತೆ ಎಲ್ಲಾ ಸರಿಯಾಗಿ ನಡೆದರೆ ೫೦೦೦೦ ರೂ ಉಪಯೋಗಿಸಿ ರಸ್ತೆ ಮೋರಿಗಳನ್ನಾದರೂ  ಕಟ್ಟುತ್ತಾರೋ ನೋಡಬೇಕು. PDO ತಮ್ಮ paternal leave ಮುಗಿಸಿ ಬೇಗ ಬಂದು ಈ ಕೆಲಸ ಕೈಗೆತ್ತಿಕೊಳ್ಳುತ್ತಾರೆಂದು ಆಶಿಸೋಣ.

ಅಬಸಿಯ ರಸ್ತೆಯ ಕೊಚ್ಚೆ, ಧೂಳುಗಳ ನಡುವೆ ನೀವು ನಾಲ್ಕು ದಿನ ನಡೆದು  ಸೂಕ್ಷ್ಮವಾಗಿ ಗಮನಿಸಿದರೆ ಒಂದು ವಿಷಯ ನಿಮಗೆ ಆಶ್ಚರ್ಯಪದಿಸುತ್ತದೆ. ಅಬಸಿಯಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ದನಕರುಗಳಿರಬಹುದು, ನಮ್ಮ ಹಾಗೆ ಈ ದನಕರುಗಳಿಗೂ ಇರುವುದೊಂದೇ ರಸ್ತೆ, ಮತ್ತು ಇಲ್ಲಿ ಯಾವ ಹಸುಗಳಿಗೂ ಶೌಚಾಲಯದ ಪ್ರಜ್ಞೆ ಇನ್ನೂ ಇದ್ದಂತಿಲ್ಲ, ಹಾಗಾಗಿ ಬೆಳಿಗ್ಗೆ ಮೇವಿಗೆ ಹೊರಟಾಗ ಎಲ್ಲಾ ಹಸುಗಳೂ ರಸ್ತೆಯನ್ನು ಬೇಕಾಬಿಟ್ಟಿ ಉಪಯೋಗಿಸಲು ಸ್ವಲ್ಪವೂ ಹಿಂಜರಿಯುವುದಿಲ್ಲ, ಅಥವಾ ಅವುಗಳು ನಮ್ಮೂರ ರಸ್ತೆಯ ಮಟ್ಟವನ್ನು ಸರಿಯಾಗಿ ಅಳೆದು ಯೋಗ್ಯ ರೀತಿಯಲ್ಲಿ ಈ ಮೂಲಕ ಉಪಯೊಗಿಸುತ್ತಿದ್ದಿರಬಹುದು. ನೆಲಕ್ಕೆ ಬಿದ್ದ ಸೆಗಣಿ ಹಸುಗಳ ಕಾಲ್ತುಳಿತ, ಮಳೆ, ಗಾಳಿಗಳಿಂದ ಇನ್ನೂ ಹರಡಿ ಗಲೀಜು ಸುಲಭವಾಗಿ ಹರಡಬಹುದಿತ್ತು. ಆದರೆ ಆಶ್ಚರ್ಯ ಎಂದರೆ ರಸ್ತೆ ಮೇಲೆ ಒಂಚೂರೂ ಸೆಗಣಿ  ಕಾಣುವುದಿಲ್ಲ.

ಇದಕ್ಕೆ ಕಾರಣ ಬೇರೆ ಯಾರೂ ಅಲ್ಲ - ನಮ್ಮೂರಿನ ದೇವಮ್ಮ. ನಾನು ನೋಡಿದಂತೆ ಕಳೆದ ೧೦-೧೫ ವರ್ಷಗಳಿಂದ ಅವಿರತವಾಗಿ ದಿನಾ ಬೆಳಿಗ್ಗೆ ಹಸುಗಳು ಮೇವಿಗೆ ಹೊರಡುವ ವೇಳೆಯನ್ನು ಕಾದು ಬುಟ್ಟಿ ತುಂಬಾ ಸೆಗಣಿ ಹೆಕ್ಕಿ ತನ್ನ ಗೊಬ್ಬರದ  ಗುಂಡಿ ತುಂಬಿಸುತ್ತಾಳೆ. ದೇವಮ್ಮನ ಕೊಟ್ಟಿಗೆ ಗೊಬ್ಬರಕ್ಕೆ ಈ ದಿನಗಳಲ್ಲಿ ತುಂಬಾ ಬೇಡಿಕೆ, ದನ ಕರುಗಳ ಸಂಖ್ಯೆ ನಿಧಾನವಾಗಿ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರದ supply ಕಡಿಮೆ,  naturally ಬೇಡಿಕೆ ಜಾಸ್ತಿ.  ದೇವಮ್ಮನ business model ಸಾಲಿಡ್! ಆದರೆ ದೇವಮ್ಮ ದುಡ್ಡು ಸಂಪಾದಿಸಲು ಸೆಗಣಿ ಹೆಕ್ಕುತ್ತಾಳೆಯೆ? ಯಾರಿಗಾಗಿ ಸಂಪಾದಿಸಬೇಕು? ನಾನು ನೋಡಿದಂತೆ ದೇವಮ್ಮ ತುಂಬಾ ಮುಂಚಿನಿಂದಲೂ ಒಂಟಿ ಹೆಂಗಸು, ವಯಸ್ಸಾದರೂ ಬೇರೆ ಮನೆಗೆ ಹೋಗುವುದಿಲ್ಲ, ಸಂಬಂಧಿಕರೆಂದು ಬೇರೆ ಊರಿಗೆ ಹೋಗಿದ್ದಂತೂ ಇಲ್ಲವೇ ಇಲ್ಲ. ಹಿಂದೆಲ್ಲಾ ತನ್ನ ಬೊಂಬಾಯಿಗೆ ಫೇಮಸ್, ಇತ್ತೀಚೆಗೆ ಕೂಗಾಡಿದ್ದನ್ನು ಕೇಳಿಲ್ಲ, ಯಾರ ಮೇಲೆ ಕಿರುಚಾಡಿಯಾಳು? ಅಥವಾ ಜಗಳ ಕಾಯುವ ಮನಸ್ಸಿದ್ದರೂ ವಯಸ್ಸು ಶಕ್ತಿಯನ್ನು ಕೊಡುತ್ತಿಲ್ಲವೇನೋ? ಅದೇನೇ ಇದ್ದರೂ ಸೆಗಣಿ ಹೆಕ್ಕುವುದರಲ್ಲಿ ಎದೆಗುಂದಿಲ್ಲ,
ನಮ್ಮೂರನ್ನು ಸ್ವಚ್ಛವಾಗಿಡಬೇಕೆಂಬ ಪ್ರೇರಣೆ ಇರಬಹುದೆ?  ನಮ್ಮವರಲ್ಲಿ ಹಲವರಿಗೆ ಸೆಗಣಿಯೇ sacred ಆಗಿರುವಾಗ ಸೆಗಣಿ ಮುಕ್ತ ರಸ್ತೆ ಎಂಬ ಕಲ್ಪನೆಯನ್ನು ದೇವಮ್ಮ ಮಾಡಿರಲಾರಳು.

ಒಮ್ಮೆ ಕೊಟ್ಟಿಗೆಗೆ ಹೋಗಿ ಬಂದರೆ ೨ ಸಾರಿ ಕೈ ಕಾಲು ತೊಳೆಯುವ ನಾನು, ಸೆಗಣಿ ಆರಿಸುವವರಿಗೆ ಅದ್ಯಾವ ಪ್ರೇರಣೆ ಎಂದು ಆಶ್ಚರ್ಯ ಪಡುತ್ತಿದ್ದೆ. ದೇವಮ್ಮಗೆ 'ಸ್ವಚ್ಚ ಭಾರತ' project ಖಂಡಿತ ತಲುಪಿರಲಾರದು. ಸ್ವಚ್ಚ ಭಾರತ ಹಾಗಿರಲಿ ಅವಳಿಗೆ ಭಾರತದ ಕಲ್ಪನೆ ಇದೆಯೇ? ನಮ್ಮೂರನ್ನು ಸ್ವಚ್ಚವಾಗಿಡಬೇಕೆಂಬ ಆಶಯ ಕೂಡ ಇಲ್ಲವೇನೋ. ಆದರೆ ಕ್ಯಾಮೆರಾ ಎದುರಿಗೆ ಗಾಂಧಿ ಹೆಸರಲ್ಲಿ ಪೊರಕೆ ಹಿಡಿಯುವ celebrityಗಳು ಕಳೆದ ೧೦-೧೫ ವರ್ಷಗಳಿಂದಲೂ ಅವಿರತವಾಗಿ ಒಂದು ದಿನವೂ ತಪ್ಪದೆ ದುಡಿದ ದೇವಮ್ಮನೆದುರು ಕ್ಷುಲ್ಲಕ ಅಲ್ಲವೆ? ಯಾವುದೋ ಹೊಸ project ಗೆ ambassador ಎಂದುಕೊಳ್ಳುತ್ತ 'ದೇಶ ಪ್ರೇಮ'ದಿಂದ ಬೀಗುವವರಿಗಿಂತ ದೇಶ, ಕಾಲಗಳ ಪರಿವೆ ಇಲ್ಲದೆಯೇ ಅದಾವ ಶೂನ್ಯದಿಂದ ಪಡೆದ ಪ್ರೇರಣೆಯ ಫಲವೇ ಅಮೂಲ್ಯ ಅಲ್ಲವೇ?

ಈ ಹೊತ್ತು ದೇವಮ್ಮಗೆ thanks ಹೇಳಬೇಕು ಅನಿಸಿದರೆ ಅಬಸಿಯ ತನಕ ಬರುವ ಅವಶ್ಯಕತೆ ಇಲ್ಲ, ಅಲ್ಲೇ ನಿಮ್ಮ ಆಸು ಪಾಸು ಕಣ್ತೆರೆದು ನೋಡಿ.