Tuesday, February 10, 2009

ಲಾಟೀನು


ಲಾಟೀನಿನ ಕತ್ತಲು, ಕಪ್ಪು ಕರಿಯೋ ಎಂಬಂತೆ ಆವರಿಸಿತ್ತು. ಒಳ ಮೈಯನ್ನೆಲ್ಲಾ ಎಣ್ಣೆಯ ಕರಿ ದಪ್ಪಗೆ ಮೆತ್ತಿಕೊಂದಿದ್ದರೆ, ಅದರೊಡೆಯ ತಿಪ್ಪಾಭಟ್ಟನ ಹೊರಮೈ ಹೋಮದ ಹೊಗೆ, ಅರ್ಧ ಹಸಿ ಕಟ್ಟಿಗೆಗಳಿಗೆ ಪ್ರತೀಕವಿದ್ದಂತೆ ತನ್ನ ನಿಜ ವರ್ನವನ್ನೆಲ್ಲ ಮುಚ್ಚಿಟ್ಟು ಗ್ರಹಣ ಬಡಿದಂತೆ ತೋರುತ್ತಿತ್ತು. ತಿಪ್ಪಾಭಟ್ಟನಿಗೇನಾಗಿದೆ? ಜಗತ್ತೆಲ್ಲಾ ಕತ್ತಲಾಗಿ ಕಾಣಲು ಕಾರಣವಾದರೂ ಏನು? ಅಮಾವಾಸ್ಯೆಯ ಘೋರತೆಯೆ? ಅಥವಾ ಇದು ಏಳು ದಿನ ರಾತ್ರಿಗಳನ್ನು ಹೋಮಕುಂಡದ ಎದುರು ಕೂತು ಕಳೆದ ಫಲಿತಾಂಶವೇ? ಸುಡು ಪ್ರಭೆಯಿಂದ ಕಣ್ಣಿನ ಪಾಪೆಗಳು ಎಂದೆಂದೂ ಹಿಗ್ಗಿವೆಯೋ? ಕಟ್ಟಿಗೆಗಳ ಹೊಗೆ ಕಣ್ಣು ಗುದ್ದೆಗಳನ್ನೆಲ್ಲಾ ಕಪ್ಪು ಮಾಡಿಸಿದೆಯೋ?

ಒಂದು
ಕೈಯಲ್ಲಿ ಲಾಟೀನು ಇನ್ನೊಂದರಲ್ಲಿ ಹೇರಂಬ ಶಾಸ್ತ್ರಿಗಳು ಹಾಕಿದ ದಿಗ್ಬಂಧನ ಹಿಡಿದು ಹೆಜಿಮೆಯ ದಿಕ್ಕು ಅಂತ ತಿಳಿದ ದಿಕ್ಕಿನ ಕಡೆಗೆ ಕಾಲು ಹಾಕುತ್ತಾ ಹೊರಟ ತಿಪ್ಪಾಭಟ್ಟ ಒಂದೇ ಗುರಿ ಅಂದರೆ ಹೆಜಿಮೆಯ ಮಾರಿ ಹೊಳೆಯ ಮೇಲ್ದಂಡೆಯ ಮೇಲೆ ಇರುವ ಕಟ್ಟುಭೂತಪ್ಪನಿಗೆ ದಿಗ್ಬಂಧನವನ್ನು ಒಪ್ಪಿಸಿ ಪೀಡೆ ಕಳೆದುಕೊಳ್ಳುವುದೇ ಆಗಿತ್ತು. ಆದರೆ ಇದು ಅಷ್ಟು ಸುಲಭದ ಮಾಲ್ಲ, ಪಂಚಭೂತಗಳಿಗೂ ಗೊತ್ತಾಗದಂತೆ ರಾತ್ರಿ ಮಾಡುವ ಕೆಲಸ ಇದಾಗಬೇಕೆಂದು ಶಾಸ್ತ್ರಿಗಳ ಕಟ್ಟಪ್ಪಣೆ ಆಗಿದೆ. ದೊಡ್ದ್ಯಾ ರಣಪಿಶಾಚಿ ಅಂದ್ರೆ ಅದರ ಪ್ರಾಮುಖ್ಯತೆ ಇನ್ನೂ ಹೆಚ್ಚು, ಅದು ಸೀಮೆಯಲ್ಲೇ ಯಾರಿಗೂ ಪಳಗಿಸಲಾಗದ ಮಹಾ ಪಿಶಾಚಿ. ಶಾಸ್ತ್ರಿಗಳ ಕಡು ಸಾಹಸ, ಏಳು ದಿನಗಳ ಹೋಮ ಈಗ ಫಲ ಕೊಟ್ಟಿದೆ, ಅದರ ಅಂತ್ಯ ಕ್ರಿಯೆಯೇ ಈಗಿನ ಕರ್ಮ.

ಜತೆಯಲ್ಲಿ ಹೊರಟ ಮಾರ್ಯಾನ ಜೊತೆಗೋ ಏನೂ ಮಾತಾಡೋ ಹಾಗಿಲ್ಲ, ಕಟ್ಟಪ್ಪಣೆ ಶಾಸ್ತ್ರಿಗಳಿಂದ. ಸುಮ್ಮನೆ ಹೆಜಿಮೆಯ ಕಡೆ ಕತ್ತಲೆ ಸವಾರಿ ಮಾಡತೊಡಗಿದ. ಮೂರು ಮಾರು ಹಿಂದೆ ಒಡೆಯನ ಹೆಜ್ಜೆ ಗುರುತಿನ ಮೇಲೆ ಹೆಜ್ಜೆ ಹಾಕುತ್ತಾ ತನ್ನೊಳಗೆ ತಾನೆ ಯೋಚಿಸುತ್ತಿದ್ದ ಮಾರ್ಯಾ. ನಿನ್ನೆ ಇಳಿಸಿದ ಕಳ್ಳು ಪದರು ಬಂದಿರಬಹುದೇ? ಕೂರ್ ದಿಬ್ಬದ ಮೇಲಿನ ನಂದೀ ಮರದ ಜೇನು ಮತ್ತೆ ಕಟ್ಟಿರಬಹುದೇ? ಹೀಗೇ ಅವರಿಬ್ಬರೂ ಬೇಲಿ ದಾಟಿ ಹೊಲಿಗೇರೀ ಹತ್ತಿರ ಬಂದರು, ಮಾರ್ಯಾನ ಹೆಂಡತಿ ರಾಮಿ ಕೂಸನ್ನು ಕಂಕುಳಲ್ಲಿ ಎತ್ತಿಕೊಂಡು ಕಾಯುತ್ತಿದ್ದಳು, ಮಾರ್ಯಾ ಅತೀ ಸಹಜ ಎಂಬಂತೆ ಒಡೆಯನನನ್ನು ಬಿಟ್ಟು ಹಟ್ಟಿ ಕಡೆ ನಿರ್ಗಮಿಸಿದ.

ಸ್ವಲ್ಪ
ಹೊತ್ತಿನ ನಂತರ ತನ್ನ ಜೊತೆ ಯಾರು ಇಲ್ಲದ್ದು ಕಂಡು ತಿಪ್ಪಾಟ್ಟ ಹೆದರತೊಡಗಿದ, ಘೋರ ಕತ್ತಲು, ನಿರಂತರವಾಗಿ ಕೊನೆಯೇ ಇಲ್ಲದಂತೆ ಎದುರುಗೊಳ್ಳುತ್ತಿರುವ ಕಪ್ಪು ಭಯಭೀತವಾಗಿತ್ತು. ತಿಪ್ಪಾಟ್ಟ ಇಂಥ ಘೋರತೆಯನ್ನು ಯಾವತ್ತೂ ಕಂಡವನಲ್ಲ. ಆವತ್ತು ರಾತ್ರಿ ಶಾಸ್ತ್ರಿಗಳು ಅಂಜನ ಹಾಕಿ ಕಂಡು ಹಿಡಿದ ಚಿಕ್ಕಜ್ಜ ದೊಡ್ದ್ಯಾ ಇತಿಹಾಸ ಕಣ್ಣು ಮುಂದೆ ಕವಿಯಿತು. ತಿಪ್ಪಾಟ್ಟ ಚಿಕ್ಕಜ್ಜ ದೊಡ್ದ್ಯಾ ಹುಟ್ಟಿದಾಗಿಂದಲೇ ದೊಡ್ದ್ಯಾನೇ ಆಗಿದ್ದನಂತೆ. ಗುಣ ಮತ್ತು ಆಕಾರಗಳಲ್ಲಿ ಯಾವತ್ತೂ ಮನೆಯ ಯಾರನ್ನೂ ಹೊಲದ ದೊಡ್ದ್ಯಾನನ್ನು ಸ್ವಂತ ತಾಯಿಯಿಂದಲೇ ಸಾಕಲು ಅಸಾಧ್ಯವಾಗತೊದಗಿತ್ತು, ಹೀಗೆ ಬಾಲ್ಯದಲ್ಲೇ ಮನೆಯಿಂದ ಹೊರಬಿದ್ದ ದೊಡ್ದ್ಯಾಗೆ ಆಶ್ರಮದಲ್ಲಿ ಪ್ರೀತಿ ವಾತ್ಸಲ್ಯಗಳಾವುವೂ ಸಿಗಲಿಲ್ಲ, ರಾಕ್ಷಸನಾಗಿ ಬೆಳೆದ ದೊಡ್ದ್ಯಾ. ಒಂದು ದಿನ ಆಶ್ರಮದಿಂದ ಮಾಯನಾದ, ಆಮೇಲೆ ಅದ್ಯಾವುದೋ ಮರಾಠಿ ಯೋಧರೊಡನೆ ಸೇರಿ ಗೆರಿಲ್ಲಾ ಯುದ್ಧ ಮಾಡತೊಡಗಿದ. ಜಾತಿಗೆ ಕೇಡು ಬಗೆದು ಜೀವ ಹತ್ಯೆಗೆ ಕಾರಣನಾದ ದೊಡ್ದ್ಯಾ ಮುಂದೆ ಮೊಗಲ್ಲ ಕೈಗೆ ಸಿಕ್ಕಿ ಹಿಂಸೆಗೆ ಗುರಿಯಾದ. ನರಳಿ ನರಳಿ ಸತ್ತ ದೊಡ್ದ್ಯಾ ಆತ್ಮಕ್ಕೆ ಶಾಂತಿ ಸಿಗದೇ ರಣಪಿಶಾಚಿಯಾಗಿ ಮನೆ ಮಂದಿಯನ್ನೆಲ್ಲ ಕಾಡತೊಡಗಿತ್ತು.

ಲಾಟೀನು ಹಿಡಿದ ಬಲ ಅಂಗೈ ಬೆವರತೊಡಗಿತು. ತಿಪ್ಪಾಟ್ಟನಿಗೆ ಹಳೆಯ ನೆನಪಾಯ್ತು. ಬಹು ಹಿಂದಿನ ನೆನಪು, ಮದುವೆಯಾದ ಹೊಸತು, ಮಾವನ ಮನೆಯಿಂದ ಹೊರಟಿದ್ದು ತಡವಾಗಿ ದಾರಿಯಲ್ಲಿ ಕತ್ತಲಾಗಿತ್ತು. ಇದೇ ಮುಂದಿನ ಮಾವಿನಕೊಪ್ಪಿಲಿನ ಹತ್ತಿರ ಬರುವಷ್ಟರಲ್ಲಿ ಗಾಢವಾದ ಮೋಡ ಕವಿದು ಬಲು ಬೇಗ ಕತ್ತಲಾಗಿತ್ತು. ಆವತ್ತೂ ಹೀಗೆಯೇ ಹೆದರಿದ್ದ ತಿಪ್ಪಾಭಟ್ಟ. ಥಟ್ಟನೆ ಬಡಿದ ಸಿಡಿಲಿನ ಸದ್ದು ಹೆಂಡತಿ ಸರಸ್ವತಿಯನ್ನು ಗಾಬರಿಗೊಳಿಸಿತ್ತು, ಬಲ ಅಂಗೈಯನ್ನು ತಬ್ಬಿ ಹಿಡಿದಳು, ಆಗ ತಿಪ್ಪಾಟ್ಟನಿಗೆ ಆಗಿದ್ದು ಬೇರೆಯೇ ಚಿಂತೆ, ತಾನು ಹೆದರಿದ್ದು ಹೆಂಡತಿಗೆ ತಿಳಿದುಬಿಟ್ಟರೆ... ? ತನ್ನ ಮರ್ಯಾದೆ ಕಡಿಮೆ ಆದರೆ ... ?

ಹಳೆ ನೆನಪು ತಿಪ್ಪಾಟ್ಟನನ್ನು ರಸಿಕನನ್ನಾಗಿಸಿತು, ಹೆಂಡತಿಯ ಸೌಮ್ಯ ಅಪ್ಪುಗೆ ನೆನಪಾಯ್ತು. ಎಂದೂ ಹೆಂಡತಿಯನ್ನು ಬಿಟ್ಟಿರದ ತಿಪ್ಪಾಭಟ್ಟನಿಗೆ ಏಳು ದಿನಗಳ ದೀರ್ಘತೆ ಅರಿವಾಯ್ತು. ಕಾಲುಗಳು ತನ್ನಷ್ಟಕ್ಕೆ ತಾನೇ ನಡೆಯುತ್ತಿದ್ದವು. ಹೆಜಿಮೆಯನ್ನು ಸೇರುವುದು ದೂರದ ಮಾತು, ತಾನು ಎಲ್ಲಿರುವೆನೆಂದೂ ಗೊತ್ತಾಗುತ್ತಿರಲಿಲ್ಲ ತಿಪ್ಪಾಟ್ಟನಿಗೆ. ದೂರದಲ್ಲಿ ಮೂಲೆ ಹೊಳೆಯ ಆಚೆ ದಂಡೆಯಲ್ಲಿ ಸಣ್ಣದೊಂದು ಬೆಳಕು ಕಂಡಿತು. ಅಡಿಕೆ ಸಾರವನ್ನು ದಾಟಿ ಆಚೆ ಹೋಗಬೇಕಿತ್ತು. ಎಡಗೈಯಲ್ಲಿರುವ ದಿಗ್ಬಂಧನವನ್ನು ಹೊಳೆಗೆ ತೂರಿ ನಿಧಾನವಾಗಿ ಒಂದೇ ಕೈಯಲ್ಲಿ ಸಾರವನ್ನು ಹಿಡಿದು ಹರಸಾಹಸ ಮಾಡಿ ಆಚೆ ದಾಟಿ ಬೆಳಕು ಬಂದ ಹಟ್ಟಿಯಂತೆ ಕಂಡ ಗುಡಿಸಿಲಿನ ಜಗುಲಿ ಅಂತ ತಿಳಿದು ಅಡ್ಡ ಬಿದ್ದ.


ಯಾವಾಗ ಬೆಳಕು ಹರಿಯಿತೋ ತಿಳಿಯಲೇ ಇಲ್ಲ. ನೆಲವೆಲ್ಲಾ ಹಸಿಯಾಗಿತ್ತು, ಗುಂಡಿಗಳೆಲ್ಲಾ ನೀರು ತುಂಬಿಕೊಂಡಿದ್ದವು, ಜೋರಾಗಿ ಬಂದ ಮಳೆ ಎಲ್ಲಾ ಘೋರತೆಯನ್ನು ತೊಳೆದಂತೆ ಅನಿಸಿತು. ಬೇಸಗೆ ಮಳೆ ಜೋರಾಗಿಯೇ ಬಂದಿದೆ ಅಂದುಕೊಳ್ಳುತ್ತ ಮನೆ ಕಡೆ ಹೊರಟ. ಬಲು ಬೇಗನೆ ಮನೆ ಹತ್ತಿರವಾಗುತ್ತಿತ್ತು, ಬೆಳಗಿನ ಚುಮುರು ಬಿಸಿಲು ತಿಪ್ಪಾಟ್ಟನನ್ನು ಸೆರೆಯಿಂದ ಮುಕ್ಥಿಗೊಳಿಸಿತ್ತು. ಜಗುಲಿಯ ಮೇಲಿಂದ ರಂಗೋಲಿ ಚುಕ್ಕಿಯ ಉದ್ದ ಲಂಗ ಹಾಕಿ, ಕೆಂಪು ರಿಬ್ಬನ್ನಿನ ಎರಡು ಜಡೆ ಪದ್ಮ ಓದುತ್ತಾ ಬಂದು ಅಪ್ಪನನ್ನು ತಬ್ಬಿದಳು.

ಅಪ್ಪ
ಸ್ನಾನಕ್ಕೆ ಹೋದ ನಂತರವೂ ಪದ್ಮಳ ಮುಖ ಪ್ರಶ್ನೆಗಳಿಂದ ಮುಕ್ತವಾಗಿರಲಿಲ್ಲ. ತಕ್ಷಣ ಏನೋ ಹೊಳೆದಂತೆ ಅನ್ನಿಸಿ ಜಗುಲಿಯ ಮೇಲೆ ಅಪ್ಪ ಇಟ್ಟು ಹೋದ ಲಾಟೀನನ್ನು ತೆಗೆದು ಹರಳಿನ ಒಳಗೆ ಕೈ ಹಾಕಿ ಒರೆಸುತ್ತಾ, ಶುಭ್ರಗೊಂಡ ಸ್ಫಟಿಕದ ಗಾಜನ್ನು ನೋಡುತ್ತಾ .......


"ಅಪ್ಪಯ್ಯಗೆ ಏನೂ ಗೊತ್ತಾಗಲ್ಲ, ಲಾಟೀನು ಬೆಳ್ಳಗಿದ್ರೆ ಬಿಳೀ ಬೆಳಕು ಕೊಡತ್ತೆ, ಕಪ್ಪಗಿದ್ರೆ ಕಪ್ಪು ಬೆಳಕು ಕೊಡತ್ತೆ, ಅದಕ್ಕೇ ಅಪ್ಪನ ಮುಖಾನೂ ಮಸಿ ಬಡಿದಂತೆ ಆಗೋಗಿದೆ, ಅಲ್ವಾ ಅಮ್ಮಾ?"
ಅಂದಳು.

4 comments:

  1. thippa bhatta yaake maaryan kaige laatinu kodalilla?

    ReplyDelete
  2. Well written.. Although i understand and read very little Kannada but i enjoyed reading it.

    ReplyDelete
  3. I thoroughly enjoyed reading it Rahul :-)

    ReplyDelete